ಪಾಯಿನ್‍ಸೆಟಿಯ - 
ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಜನಪ್ರಿಯ ಅಲಂಕಾರ ಸಸ್ಯ. ಯೂಫೋರ್ಬಿಯ ಪಲ್ಚೆರೀಮ ಅಥವಾ ಪಾಯಿನ್‍ಸೆಟಿಯ ಪಲ್ಚೆರೀಮ ಇದರ ವೈಜ್ಞಾನಿಕ ಹೆಸರು. ಈಸ್ಟರ್ ಫ್ಲವರ್, ಕ್ರಿಸ್‍ಮಸ್ ಫ್ಲವರ್. ಲಾರ್‍ಸ್ಟರ್ ಫ್ಲವರ್ ಮುಂತಾದ ಹೆಸರುಗಳೂ ಇದಕ್ಕೆ ಉಂಟು. ಮೆಕ್ಸಿಕೋ ಮತ್ತು ಮಧ್ಯ ಅಮೆರಿಕಗಳು ಇದರ ತವರು ಪ್ರದೇಶಗಳು. ಇದಕ್ಕೆ ಅಲಂಕಾರ ಪ್ರಾಮುಖ್ಯ ಇರುವುದರಿಂದ ಪ್ರಪಂಚದ ತೇವಪೂರಿತ ಉಷ್ಣ ಹಾಗೂ ಉಪೋಷ್ಣ ವಲಯಗಳಲ್ಲೆಲ್ಲ ಇದನ್ನು ಬೆಳೆಸಲಾಗಿದೆ.

ಇದು ಪೊದೆಸಸ್ಯ : 1-3 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ಸರಳ; ಪರ್ಯಾಯ ಮಾದರಿಯಲ್ಲಿ  ಜೋಡಣೆಗೊಂಡಿವೆ. ಇವುಗಳ ಆಕಾರ ಅಂಡದಂತೆ ಇಲ್ಲವೆ ಈಟಿಯಂತೆ. ಎಲೆಯ ಅಂಚು ನಯವಾಗಿರಬಹುದು. ದಂತಿತವಾಗಿರಬಹುದು ಇಲ್ಲವೆ ಪಾಲಿಯುಕ್ತವಾಗಿರಬಹುದು. ಹೂಗೊಂಚಲುಗಳನ್ನು ಸುತ್ತುವರಿದಿರುವ ಎಲೆಗಳು ಹಸರುಬಣ್ಣದವಾಗಿರದೆ ಉಜ್ವಲ ಕೆಂಪು ಬಣ್ಣದವಾಗಿರುವುದು ಈ ಗಿಡದ ವಿಶಿಷ್ಟ ಲಕ್ಷಣ. ಇವುಗಳ ಆಕಾರ ಸಾಮಾನ್ಯವಾಗಿ ಈಟಿಯ ತುದಿಯಂತೆ. ಇಂಥ ಎಲೆಗಳಿಂದಾಗಿಯೇ ಗಿಡಕ್ಕೆ ವಿಶೇಷ ಅಂದ ಒದಗಿದೆ. ಗಿಡಕ್ಕೆ ಅಲಂಕಾರ ಪ್ರಾಮುಖ್ಯ ಬಂದಿರುವುದು ಈ ಎಲೆಗಳಿಂದಲೇ. ಕೆಲವೊಮ್ಮೆ ಎಲೆಗಳು ಬಿಳಿಬಣ್ಣದವಾಗಿರುವುದೂ ಉಂಟು. ಉದಾಹರಣೆಗೆ ಆಲ್ಬ ಎಂಬ ರೂಪಭೇದ. ಪಾಯಿನ್‍ಸೆಟಿಯದ ಹೂಗೊಂಚಲು ಇದರ ಇತರ ಸಂಬಂಧಿ ಯೂಫೋರ್ಬಿಯಗಳಲ್ಲಿರುವಂತೆಯೇ (ಕೋಲುಕಳ್ಳಿ, ಬೊಂತೆಕಳ್ಳಿ, ಎಲೆಕಳ್ಳಿ, ಡಬ್ಬಗಳ್ಳಿ ಇತ್ಯಾದಿ) ಸಯೇಥಿಯಮ್ ಎಂಬ ವಿಶಿಷ್ಟ ಮಾದರಿಯದು. ಸೈಮೋಸ್ ರೀತಿಯ ಪುಷ್ಪ ಮಂಜರಿಯಾದ ಇದರಲ್ಲಿ ಮುಖ್ಯ ಅಕ್ಷ ಹಾಗೂ ಬ್ರಾಕ್ಟ್‍ಗಳು ಒಂದುಗೂಡಿ ಬಟ್ಟಲಾಕಾರದ ಇನ್‍ವಲ್ಯೂಕರ್ ಎಂಬ ರಚನೆಯಾಗಿ ರೂಪುಗೊಳ್ಳುತ್ತವೆ. ಇದರ ಬಣ್ಣ ಹಸುರು. ಬಟ್ಟಲಿನ ಹೊರಮೈಮೇಲೆ ಒಂದು ಪಾಶ್ರ್ವದಲ್ಲಿ ಹಳದಿ ಬಣ್ಣದ ಒಂದು ಅಥವಾ ಎರಡು ಮಧುಗ್ರಂಥಿಗಳಿವೆ. ಬಟ್ಟಲಿನ ಕೇಂದ್ರಭಾಗದಲ್ಲಿ ಉದ್ದತೊಟ್ಟಿನ ಒಂದೇ ಒಂದು ಹೆಣ್ಣುಹೂವೂ ಅದರ ಸುತ್ತ ಅನೇಕ ಗಂಡುಹೂಗಳೂ ಇರುವುವು.  ಹೆಣ್ಣು ಹೂವಿನಲ್ಲಿ ಕೇವಲ ಅಂಡಾಶಯ ಮಾತ್ರ ಉಂಟು. ದಳಗಳಾಗಲೀ ಪುಷ್ಪಪತ್ರಗಳಾಗಲೀ ಇಲ್ಲ. ಹಾಗೆಯೇ ಪ್ರತಿಗಂಡುಹೂವಿನಲ್ಲಿ ಒಂದೇ ಒಂದು ಕೇಸರ ಇದೆ.

ಪಾಯಿನ್‍ಸೆಟಿಯವನ್ನು ಕಾಂಡ ತುಂಡುಗಳಿಂದ ವೃದ್ಧಿಸಲಾಗುತ್ತದೆ. ಗೋಡುಮಣ್ಣು ಇದರ ಬೆಳವಣಿಗೆಗೆ ಒಳ್ಳೆಯದು. ಪಾಯಿನ್‍ಸೆಟಿಯದಲ್ಲಿ ಪ್ಲೆನಿಸಿಮ ಮತ್ತು ಆಲ್ಬ ಎಂಬ ಎರಡು ಮುಖ್ಯ ಬಗೆಗಳಿವೆ. ಇವನ್ನು ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ ಬೆಳೆಸುವುದೊಂದೇ ಅಲ್ಲದೆ ಪುಷ್ಪಮಂಜರಿಗಳನ್ನು ಹೂದಾನಿಗಳಲ್ಲಿಟ್ಟು ಮನೆ ಅಲಂಕರಣಕ್ಕೆ ಬಳಸುವುದೂ ಉಂಟು.
(ಎಂ.ಜೆ.)
(ಪರಿಷ್ಕರಣೆ : ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ